ಪತ್ರ ಸಾಲ -
	ಸರ್ಕಾರ, ಕಂಪನಿ ಮುಂತಾದ ಸಂಸ್ಥೆಗಳು ಸಾರ್ವಜನಿಕರಿಗೆ ಸಾಲಪತ್ರಗಳನ್ನು ನೀಡಿ ಅವರಿಂದ ಎತ್ತುವ ದೀರ್ಘಾವಧಿ ಸಾಲ, ಪತ್ರ ಋಣ (ಬಾಂಡೆಡ್ ಡೆಟ್). ಪ್ರತಿಯೊಂದು ಸಾಲಪತ್ರದಲ್ಲೂ ಸಂಸ್ಥೆಯ ಸಹಿಯೊಂದಿಗೆ ಸಾಲದ ಮೊಬಲಗು, ಬಡ್ಡಿಯ ದರ, ಸಾಲದ ಅವಧಿ ಮುಂತಾದ ವಿವರಗಳು ನಮೂದಾಗಿರುತ್ತವೆ.

	ಸಾಲ ಪತ್ರಗಳಿಗೂ ಕಂಪನಿಯ ಷೇರು ಪತ್ರಗಳಿಗೂ ವ್ಯತ್ಯಾಸಗಳಿವೆ. ಸಾಲ ಪತ್ರ ಒಂದು ಸಂಸ್ಥೆ ಪಾವತಿ ಮಾಡಬೇಕಾದ ಸಾಲದ ನಿದರ್ಶನ ; ಷೇರುಪತ್ರ ಕಂಪನಿಯಲ್ಲಿ ಸಂಬಂಧಪಟ್ಟ ವ್ಯಕ್ತಿ ಪಡೆದಿರುವ ಒಡೆತನದ ನಿದರ್ಶನ. ಸಾಲ ಪತ್ರದಾರನಿಗೆ ಬಡ್ಡಿ ದೊರೆತರೆ, ಷೇರುಪತ್ರದಿಂದ ಷೇರುದಾರನಿಗೆ ಲಾಭಾಂಶ (ಡಿವಿಡೆಂಡ್) ದೊರೆಯುತ್ತದೆ. ಷೇರುದಾರನಿಗೆ ಕಂಪನಿಯ ಆಡಳಿತದಲ್ಲಿ ಹಕ್ಕುಂಟು ; ಸಾಲಪತ್ರದಾರನಿಗೆ ಈ ಹಕ್ಕಿಲ್ಲ.

	ಸಂಸ್ಥೆಗಳು ನೀಡುವ ಸಾಲಪತ್ರಗಳು ಆಧಾರಸಹಿತವಾಗಿಯಾಗಿಲಿ ಆಧಾರರಹಿತವಾಗಿಯಾಗಲಿ ಇರುತ್ತವೆ. ಸಾಲ ಎತ್ತುವ ಸಂಸ್ಥೆ ತನ್ನ ಯಾವುದಾದರೊಂದು ಸ್ಥಿರ ಸ್ವತ್ತಿನ ಅಡಮಾನದ ಆಧಾರದ ಮೇಲೆ ಪತ್ರಗಳನ್ನು ನೀಡಬಹುದು. ಉದಾಹರಣೆಗೆ, ಯಾವುದಾದರೂ ಗೊತ್ತಾದ ಕಟ್ಟಡವಾಗಲಿ, ಜಮೀನಾಗಲಿ ಸಾಲಕ್ಕೆ ಆಧಾರವಾಗಬಹುದು. ಹಾಗಿಲ್ಲದಿದ್ದಲ್ಲಿ ಸಂಸ್ಥೆಯ ಎಲ್ಲ ಆಸ್ತಿಗಳ ಮೇಲೆ ಸಾರ್ವತ್ರಿಕ ಅಡಮಾನ ಏರ್ಪಡಬಹುದು. ಕೂಡ ಬಂಡವಾಳ ಕಂಪನಿಗಳ ಸಾಲಪತ್ರಗಳು ಸಾಧಾರಣವಾಗಿ ಎರಡನೆಯ ಬಗೆಯವಾಗಿರುತ್ತವೆ.

	ಸಾಲಪತ್ರಗಳು ಸಾಮಾನ್ಯವಾಗಿ ಈ ಅಂಶಗಳನ್ನೊಳಗೊಂಡಿರುತ್ತವೆ : 1. ಸಾಲ ತೀರುವೆಯ ಷರತ್ತು : ಪತ್ರಸಾಲದ ಅವಧಿ ತೀರುವ ಮೊದಲೇ ಅವುಗಳ ಮೊಬಲಗನ್ನು ಹಿಂದಿರುಗಿಸುವ ಹಕ್ಕು. 2. ಪರಿವರ್ತನೆ : ಪತ್ರಸಾಲವನ್ನು ಬೇರೆಯ ಸಾಲಕ್ಕೆ ಪರಿವರ್ತನೆ ಮಾಡಿಕೊಳ್ಳುವ ಅವಕಾಶವನ್ನು ಸರ್ಕಾರದ ಸಾಲಪತ್ರ ಧಾರಕನಿಗೆ ಸರ್ಕಾರ ನೀಡುವುದುಂಟು. 3. ಋಣ ವಿಮೋಚಕ ನಿಧಿ : ಸಾಲವನ್ನು ತೀರಿಸುವುದಕ್ಕಾಗಿ ನಿಯತ ಕಾಲಗಳಲ್ಲಿ ವರಮಾನದಿಂದ ನಿಗದಿಯಾದ ಮೊಬಲಗನ್ನು ನಿಧಿಗಾಗಿ ಎತ್ತಿಡುವುದುಂಟು.
(ಪಿ.ಎಸ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ